Total Pageviews

Friday, August 4, 2017

ಭಗವಂತ ನಮಗಾಗಿ ಮಾಡದಿದ್ದದು ಏನು?

ಭಗವಂತ ನಮಗಾಗಿ ಮಾಡಿರುವದನ್ನು ನಾವು ಅನಂತ ಜನ್ಮ ಎತ್ತಿ ಬಂದರೂ ತಿಳಿಯಲಾಗದು. ಆದ್ದರಿಂದಲೇ ನಾವು ಓದುವ ಪ್ರತಿ ಆಧ್ಯಾತ್ಮ ಪುಸ್ತಕಗಳು ಅಥವಾ ಕೇಳುವ ಪ್ರವಚನಗಳು ಭಗವಂತ ನಮಗಾಗಿ ಮಾಡಿದನ್ನು ಹೇಳುತ್ತವೆ. ಈ ವ್ಯಾಪಕತೆ ಹೊಸದಾಗಿ ಭಗವಂತನ ತಿಳಿಯಲು ಹೋರಾಟ ಜಿಜ್ಞಾಸುವಿಗೆ ತಲೆ ಬಿಸಿ ಮಾಡುತ್ತದೆ.

ಅದಕಾಗಿ ನಾವು ಮೊದಲು ಭಗವಂತ ನಮಗಾಗಿ ಏನು ಮಾಡಿಲ್ಲ ಎಂದು ತಿಳಿಯುವುದು ಉತ್ತಮ. ಏಕೆಂದರೆ ಅದು ಬಲು ಕಡಿಮೆ. ಇದನು ಅರ್ಥ ಮಾಡಿ ಕೊಂಡಾಗ ಭಗವಂತ ನಮಗಾಗಿ ಮಾಡಿದ್ದರ ಅಪಾರತೆಯ ಹಾಗೂ ಕರುಣೆಯ ಅರಿವು ಆಗುತ್ತದೆ.

ಇದರ ಅರಿವಿಲ್ಲದಾಗ ನಾವು ತಿಳಿದೊ ತಿಳಿಯದೆಯೋ ನಮ್ಮ ಪ್ರಾರಬ್ಧಕ್ಕಾಗಿ ಭಗವಂತನನ್ನು ದೂಷಿಸುತ್ತೇವೆ. ಭಗವಂತನೇ ಎಲ್ಲ ಸೃಷ್ಟಿಸಿದ್ದರೆ ನನಗೇಕೆ ಈ ಬುದ್ಧಿ ಕೊಟ್ಟ? ನನ್ನಿಂದ ಏಕೆ ಈ ಕೆಟ್ಟ ಕೆಲಸ ಮಾಡಿಸಿದ? ನಮ್ಮ ಹಿಂದಿನ ಜನ್ಮದ ಕರ್ಮ ಫಲ ಕಾರಣ ಎಂಬ ಅರಿವು ಬಂದಾಗ ಕೂಡ, ನಾನು ಮೊದಲ ಬಾರಿ ಹುಟ್ಟಿದಾಗ ಯಾವುದೇ ಕರ್ಮ ಫಲ ಇರಲಿಲ್ಲತಾನೇ, ಹಾಗಾದರೆ ಪ್ರಥಮ ಬಾರಿ ನಾನೇಕೆ ಕೆಟ್ಟ ಕೆಲಸ ಮಾಡಿದೆ ಎಂಬ ಪ್ರಶ್ನೆ ಏಳುತ್ತದೆ. ಇದಕೇನು ಉತ್ತರ?

ಇದನು ತಿಳಿಯಲು ಇನ್ನೂ ಕೆಲವು ಮೂಲಭೂತ ಪ್ರಶ್ನೆಗಳನು ಕೇಳುವ.

೧. ಜೀವಿಗಳು ಸೃಸ್ಟಿಯಾಗಿದ್ದು ಯಾವಾಗ?
ಜೀವಿಗಳು ಭಗವಂತನಂತೆ ಅನಾದಿ ನಿತ್ಯರು.

೨. ಜೀವಿಗಳಿಗೆ ಸಾತ್ವಿಕ, ರಾಜಸಿಕ ಹಾಗೂ ತಾಮಸಿಕ ಗುಣ ನೀಡಿರುವರು ಯಾರು?
ಇದೊಂದು ಬಲು ಮುಖ್ಯವಾದ ಪ್ರಶ್ನೆ. ಏಕೆಂದರೆ ಭಗವಂತ ಕೊಟ್ಟಿದ್ದು ಎಂದಾದರೆ ಇಲ್ಲಿ ರಾಜಸಿಕ ಹಾಗೂ ತಾಮಸಿಕ ಜೀವಿಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ.

ಇದಕ್ಕೆ ಒಂದು ಉತ್ತರ ಸಿಕ್ಕಿದ್ದು ಶ್ರೀ || ಪೇಜಾವರ ಶ್ರೀಗಳ ನ್ಯಾಯಸುಧಾ ಸಾರ ಪ್ರವಚನದಲ್ಲಿ.
ಅವರು ಹೇಳಿದ್ದು: ಜೀವನ ವ್ಯಕ್ತಿತ್ವ ದೇವರ ಸೃಷ್ಟಿ ಅಲ್ಲ. ಅದು ಆನಾದಿಯಾಗಿ ಬಂದಿದ್ದು.

ಈ ಉತ್ತರ ಸಮರ್ಪಕ ಅನಿಸುತ್ತೆ. ಏಕೆಂದರೆ ಅನೇಕ ಪ್ರವಚನಗಳಲ್ಲಿ ಕೇಳಿರುವಂತೆ ಭಗವಂತ ತೋಟಗಾರನಂತೆ ಜೀವಿಗಳನ್ನು ಬೀಜಗಳಂತೆ ಬಿತ್ತಿ ಅವುಗಳಿಗೆ ನೀರುಣಿಸಿ ಪೋಷಣೆ ಮಾಡುತ್ತಾನೆ. ಬೀಜಗಳ ಗುಣದಂತೆ ಅವು ಬೆಳೆಯುತ್ತವೆ. ಅದರಲ್ಲಿ ಭಗವಂತನ ಪಾತ್ರವಿಲ್ಲ. ಬೀವಿನ ಬೀಜ ಬೀವಿನ ಗಿಡವಾಗಿ ಹಾಗೂ ಮಾವಿನ ಗೊಪ್ಪ ಮಾವಿನ ಗಿಡವಾಗಿ ಬೆಳೆದು ಅದರ ಗುಣಧರ್ಮದಂತೆ ಫಲ ಕೊಡುತ್ತವೆ.

ಜೀವಿಗಳ ಗುಣದಂತೆ ಅವರವರ ಕರ್ಮ ಸಂಕೋಲೆ ಬಿಗಿಯುತ್ತ ಹೋಗುತ್ತದೆ.

೩. ಜೀವಿಯ ಸ್ವರೂಪ ಭಗವಂತ ಸೃಷ್ಟಿ ಅಲ್ಲದಿದ್ದರೆ ಜೀವಿಗೆ ಕರ್ತೃತ್ವ ಸ್ವಾತಂತ್ರ್ಯ ಕೊಟ್ಟಿದ್ದಾನೆಯೇ ? 

ಈ ಪ್ರಶ್ನೆಗೆ ಉತ್ತರ ಈ ಅಧ್ಭುತವಾದ ಪ್ರವಚನದಲ್ಲಿ ದೊರಕಿದೆ. ಅದರ ಸಾರಾಂಶ ಕೆಳಗಿದೆ.

ಜೀವನ ಯೋಗ್ಯತೆ ಸ್ವಭಾವ ಅಥವಾ ಸ್ವರೂಪ ಕೂಡ ಜೀವನಂತೆ ಅನಾದಿ ಕಾಲದಿಂದ ಇದೆ. ಇದು ದೇವರು ಮಾಡಿದ್ದಲ್ಲ. ಇದು ದೇವರು ಮಾಡಿದಲ್ಲದಿದ್ದರೂ ಜೀವನಿಗೆ ಸ್ವಾತಂತ್ರ್ಯ  ಇಲ್ಲ.  ಜೀವ ಹುಟ್ಟಿಲ್ಲ. ಅವನು ಹೊಸದಾಗಿ ಸೃಷ್ಟಿ ಆಗಿಲ್ಲ. ಜೀವ ತನ್ನ ಸ್ವರೂಪಕ್ಕೆ ಅನುಗುಣವಾಗಿ ಸಾತ್ವಿಕ, ತಾಮಸಿಕ ಕರ್ಮ ಮಾಡುತ್ತಾನೆ.  ಆ ಕರ್ಮಗಳಿಗೆ ವೇದದ ಪ್ರಕಾರ ಫಲ ಕೊಡುವುದು ದೇವರು.

ಜ್ಞಾನ, ಇಚ್ಛೆ, ಪ್ರಯತ್ನ ಈ ಮೂರುಗಳ ಸಂಗಮವೇ ಕರ್ತೃತ್ವ. ಕರ್ತೃತ್ವಕ್ಕೆ ಸ್ವಾತಂತ್ರ್ಯದ ಅವಶ್ಯಕತೆ ಇಲ್ಲ. ಜೀವನ ಯೋಗ್ಯತೆ, ಪ್ರಯತ್ನ ಹಾಗೂ ಭಗವಂತನ ಸಂಕಲ್ಪ ಈ ಮೂರು ಸೇರಿದಾಗ ಕಾರ್ಯ ಆಗುತ್ತದೆ. ಭಗವಂತನ ಸಂಕಲ್ಪ ಅನಾದಿ ಕಾಲದ ಕರ್ಮಗಳ ಫಲ ಕೊಡುವದಕ್ಕೆ. ಅದನ್ನು ಭಗವಂತ ವೇದ ವಾಕ್ಯಗಳಿಗೆ ಅನುಗುಣವಾಗಿ ಕೊಡುತ್ತಾ ಹೋಗುತ್ತಾನೆ. ವೇದ ಭಗವಂತನ ಸಂವಿಧಾನ.  ಇಲ್ಲಿ ಗಮನಿಸಬೇಕಾದ ಅಂಶ ಜೀವಿಯ ಯೋಗ್ಯತೆ ಹಾಗೂ ಪ್ರಯತ್ನದ ಹೊಣೆ ಕೇವಲ ಜೀವಿಯದೆ ಆಗಿದೆ.  ಇಲ್ಲಿ ಯಾವುದೇ ಅನ್ಯಾಯ ಅಥವಾ ಪಕ್ಷಪಾತದ ಪ್ರಶ್ನೆ ಇಲ್ಲ.

ಜೀವನ ಸ್ವರೂಪ ಭಗವಂತನ ಸೃಷ್ಟಿ ಅಲ್ಲದಿದ್ದರೂ ಜೀವ ತನ್ನೆಲ್ಲ ಕ್ರಿಯೆಗಳಿಗಾಗಿ ಭಗವಂತನ ಮೇಲೆ ಅವಲಂಬಿಸಿದ್ದಾನೆ. ಅತಿ ಸರಳವಾದ ಕ್ರಿಯೆಗಳಾದ ಉಸಿರಾಟ, ಉಂಡ ಅನ್ನ ಜೀರ್ಣವಾಗುವುದು ಕೂಡ ಜೀವಿಯ ಕೈಯಲ್ಲಿ ಇಲ್ಲ. ಇದರಿಂದ ಹರಿ ಸರ್ವೊತ್ತಮತ್ವಕ್ಕೆ ಯಾವುದೇ ಧಕ್ಕೆ ಇಲ್ಲ.

|| ಶ್ರೀ ಕೃಷ್ಣಾರ್ಪಣ ಮಸ್ತು ||

No comments:

Post a Comment