Total Pageviews

Tuesday, August 15, 2017

ಆರಾಧನೆಯ ತೀರ್ಥ ಪ್ರಸಾದ ವ್ಯವಸ್ಥೆಯ ನ್ಯೂನತೆಗಳು

ಗುರುಗಳ ಆರಾಧನೆಗಳು ಮಧ್ವ ಪರಂಪರೆಯ ಒಂದು ಅವಿಭಾಜ್ಯ ಅಂಗವಾಗಿ ಬೆಳೆದುಕೊಂಡು ಬಂದಿವೆ. ಇದು ಮಾಧ್ವರ ಸಂಘಟನಾ ಕೌಶಲ್ಯ ಹಾಗೂ ಒಗ್ಗಟ್ಟನ್ನು ಸಾರುವ ವೇದಿಕೆಗಳು ಹೌದು.

ಆದರೆ ಆರಾಧನೆಗಳು ನಡೆಯುವ ಬಗೆಯನ್ನು ಸುಧಾರಣೆ ಮಾಡಲು ಅನೇಕ ಅವಕಾಶಗಳಿವೆ ಎಂದು ಅನಿಸುತ್ತದೆ. ಮುಖ್ಯವಾಗಿ ಕೆಲ ಅಂಶಗಳತ್ತ ಗಮನ ತೋರಲು ಕೋರುತ್ತೇನೆ.

ಜ್ಞಾನ ಕಾರ್ಯ ಪೂಜೆ ಮೊದಲಾದವುಗಳು ಮುಖ್ಯವಾದರೂ ಎಲ್ಲಿ ತೀರ್ಥ ಪ್ರಸಾದ ತಪ್ಪುವುದೋ ಅಥವಾ ತಡವಾಗುವುದು ಎಂದು ಅನೇಕ ಭಕ್ತರ ಗಮನ ಅತ್ತ ಕಡೆಯೇ ಹರಿದಿರುತ್ತದೆ. ತೀರ್ಥ ಪ್ರಸಾದ ಈ ಕಾರ್ಯಕ್ರಮಗಳ ಒಂದು ಪ್ರಮುಖ ಅಂಗ. ಈ ವ್ಯವಸ್ಥೆ ಸಮರ್ಪಕವಾಗಿಲ್ಲ.  ಈ ಕೆಳಗಿನ ನ್ಯೂನತೆಗಳು ಕಾರ್ಯಕ್ರಮಕ್ಕೆ ಇನ್ನೂ ಹೆಚ್ಚಿನ ಮೆರುಗು ಬರುವುದನ್ನು ತಪ್ಪಿಸುತ್ತಿವೆ

೧. ಯಾರಿಗೆ, ಯಾವಾಗ ಹಾಗೂ ಎಲ್ಲಿ ತೀರ್ಥ ಪ್ರಸಾದ ಎಂಬ ಮಾಹಿತಿ ಸರಿಯಾಗಿ ಸಿಗುವದಿಲ್ಲ

೨. ಕೆಲವೊಮ್ಮೆ ತೀರ್ಥ ಪ್ರಸಾದಕ್ಕಾಗಿ ನೂಕು ನುಗ್ಗಲು ಕೂಡ ಆಗುತ್ತದೆ. ಯಾವ ಪಂಕ್ತಿಯಲ್ಲಿ ಯಾರು ಕೂಡಬೇಕು ಎಂಬ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ

೩. ಆರಾಧನೆ ಎಂದ ಮೇಲೆ ಪ್ರಸಾದ ತಡವಾಗುವುದು ತಪ್ಪೇನಿಲ್ಲ. ಆದರೆ ಚಿಕ್ಕ ಮಕ್ಕಳು ವೃದ್ಧರು ಕೂಡ ಬಂದಿರುತ್ತಾರೆ. ಅವರಿಗೆ ಒಂದೇನಾದರೂ ವ್ಯವಸ್ಥೆ ಬೇಕು ಹಾಗೂ ಕಾಲ ಕಾಲಕ್ಕೆ ಯಾವಾಗ ತೀರ್ಥ ಪ್ರಸಾದ ಆರಂಭವಾಗಲಿದೆ ಎಂಬ ಮಾಹಿತಿ ದೊರೆಯಬೇಕು

೪. ತೀರ್ಥ ಪ್ರಸಾದ ಪ್ರತಿ ಪಂಕ್ತಿ ಊಟವಾದ ನಂತರ ಎಲೆ ಎತ್ತಿ ಎಂಜಲು ಬಳೆದು ಮುಂದಿನ ಪಂಕ್ತಿಗೆ ತಯಾರಿ ಮಾಡಲು ಜನ ಇರುವುದಿಲ್ಲ. ಈ ಸೇವೆ ಮಹಾ ಪುಣ್ಯಕರ. ಸೇವೆ ಮಾಡುವ ಆಸೆ ಇದ್ದರೂ ಎಲ್ಲಿ ಹೇಗೆ ಎಂಬ ಮಾಹಿತಿ ಇರುವುದಿಲ್ಲ.

೫. ದ್ವಾದಶಿ ಆರಾಧನೆ ಇದ್ದರೆ ಹಿಂದಿನ ದಿನದ ಏಕಾದಶಿ ಆದ್ದರಿಂದ ಎಲ್ಲರೂ ದಣಿದಿರುತ್ತಾರೆ.  ಆದ್ದರಿಂದ  ಮೊದಲೇ ಯೋಜನೆ ಮಾಡದೆ ಊಟಕ್ಕೆ ಕುಳಿತಾಗ ಬಡಿಸುವ ಸ್ವಯಂ ಸೇವಕಾರಿಗಾಗಿ ಕರೆಯುವುದು ಎಷ್ಟು ಸೂಕ್ತ? ಸ್ವಯಂ ಸೇವಕರು ಸಿಗದೆ ಈ ಸಮಯದಲ್ಲಿ ತಡ ಮಾಡುವುದು ಎಷ್ಟು ಸೂಕ್ತ?

೬. ತೀರ್ಥ ಪ್ರಸಾದ ಒಂದೇ ಸಮಯಕ್ಕೆ ಬೇರೆ ಬೇರೆ ಸ್ಥಳಗಳಲ್ಲಿ ವ್ಯವಸ್ಥೆ ಮಾಡಿದ್ದರೆ ಎಲ್ಲಿ ಎಷ್ಟು ಜನ ಕೂಡಬಹುದು ಎಂಬ ಮಾಹಿತಿ ಇರುವುದಿಲ್ಲ. ಗಮನಿಸಿ ಇದೇನು ಮೊದಲ ಬಾರಿ ಅಲ್ಲವಲ್ಲ

೭. ತಿಂದು ಮುಗಿಸಿದ ಎಲೆ ಹಾಗೂ ಎಂಜಲು ಎಲ್ಲಿ ಬೇಕಾದರಲ್ಲಿ ಬಿಸಾಡುವುದು ಏನು ಚೆನ್ನ?

೮. ಕೆಲವು ಕಡೆ ಊಟದ ನಂತರ ಕೈ ತೊಳೆಯಲು ಸರಿಯಾದ ಜಾಗದ ವ್ಯವಸ್ಥೆ ಹಾಗೂ ನೀರು ಇರುವುದಿಲ್ಲ. ಅದಕಾಗಿ ಕುಡಿಯುವ ನೀರು ಉಪಯೋಗಿಸುವುದು ಎಷ್ಟು ಸೂಕ್ತ?



ಬೇರೆ ಕೆಲ ಮುಖ್ಯ ಅಂಶಗಳು:
೧. ಚಿಕ್ಕ ಮಕ್ಕಳಿಗೆ ಹಾಲು ಹಾಗೂ ವೃದ್ಧರಿಗೆ ಅವಲಕ್ಕಿ ಅಥವಾ ಹಣ್ಣುಗಳ ವ್ಯವಸ್ಥೆ ಅತ್ಯಂತ ಉಪಯುಕ್ತ
೨. ಆರಾಧನಾ ಕಾರ್ಯಕ್ರಮ ಹಲವು ಘಂಟೆಗಳ ಕಾಲ ನಡೆಯುವುದು ಆದ್ದರಿಂದ ಯಾರಾದರೂ ಶೌಚಾಲಯ ಉಪಯೋಗಿಸಬೇಕೆಂದರೆ ವ್ಯವಸ್ಥೆ ಇರುವುದಿಲ್ಲ. ಇದ್ದರೆ ಕೀಲಿ ಹಾಕಿರುತ್ತಾರೆ ಅಥವಾ ನೀರು ಇರುವುದಿಲ್ಲ. ಎಲ್ಲ ಇದ್ದರೆ ಅದು ಉಪಯೋಗಿಸುವ ಸ್ಥಿತಿಯಲ್ಲಿ ಇರುವುದಿಲ್ಲ
೩. ಕುಡಿಯಲು ಕೆಲವೊಮ್ಮೆ ನೀರು ಸಿಗುವುದಿಲ್ಲ
೪. ಕೂಡಲು ಸಮರ್ಪಕ ಆಸನ ವ್ಯವಸ್ಥೆ ಇರುವುದಿಲ್ಲ
೫. ಒಂದು ಕಡೆ ಪ್ರವಚನ, ಒಂದು ಕಡೆ ಪಾರಾಯಣ ಮತ್ತು ಹಲವು ಕಡೆಗೆ ಟೀವೀ ಯಲ್ಲಿ ಪೂಜೆ ತೋರಿಸುವ ವ್ಯವಸ್ಥೆ ಮಾಡಬಹುದು
೬. ಈಗ ಸ್ವಂತ ವಾಹನಗಳಿಗೇನು ಕಮ್ಮಿಯಿಲ್ಲ. ಒಂದೇ ಊರಿಗೆ ಹೋಗುವ ವಾಹನವಿದ್ದು ಅದರಲ್ಲಿ ಸ್ಥಳಾವಕಾಶ ಇದ್ದರೂ ಅದನು ಉಪಯೋಗಿಸಿಕೊಳ್ಳಲು ಆಗುತಿಲ್ಲ

ದುಡ್ಡಿಗೇನು ಕಮ್ಮಿಯಿಲ್ಲ. ಭಗವಂತನ ಅನುಗ್ರಹದಿಂದ ಈ ಕಾರ್ಯಕ್ರಮಗಳು ಅದ್ದೂರಿಯಾಗಿಯೇ ನಡೆಯುತ್ತಿವೆ. ಆದರೆ ಅದರ ಸಮರ್ಪಕ ಬಳಕೆ ಆಗುತಿಲ್ಲ. ಈ ತಂತ್ರಜ್ಞಾನದ ಯುಗದಲ್ಲಿ ಕೂಡ ನಾವು ಅದನು ಸರಿಯಾಗಿ ಬಳಸಿಕೊಳ್ಳದೆ ಅವ್ಯವಸ್ಥೆ ಮುಂದುವರಿದರೆ ಯುವ ಜನತೆಯಿಂದ ಇನ್ನೂ ದೂರವಾಗುವದರಲ್ಲಿ ಸಂಶಯವಿಲ್ಲ. ಹಾಗಾದಾಗ ಯುವ ಜನರು ಧರ್ಮ ವಿಮುಖರಾಗುತಿದ್ದಾರೆ ಎಂದು ದೂರುವುದು ಎಷ್ಟು ಸರಿ?


No comments:

Post a Comment