Total Pageviews

Thursday, August 17, 2017

ಪರಿಮಳಾಚಾರ್ಯ

ಶ್ರೀ ರಾಘವೇಂದ್ರರ ಬಗ್ಗೆ ನಾವು ತಿಳಿದದ್ದು ಬರೀ ಪವಾಡ ಪುರುಷರು ಅಥವಾ ಕಾಮಧೇನುಗಳು ಎಂದು. ಶ್ರೀ ರಾಘವೇಂದ್ರರನ್ನು ಪರಿಮಳಾಚಾರ್ಯರು ಎಂದು ಕೂಡ ಕರೆಯುತ್ತಾರೆ ಎಂದು ಎಷ್ಟೊಂದು ಬಾರಿ ಗೊತ್ತಿರುವುದಿಲ್ಲ ಅಥವಾ ಕೇಳಿದ್ದರೂ ಕೂಡ ಯಾಕೆ ಆ ಹೆಸರು ಬಂದಿತು ಎಂದು ಗೊತ್ತಿರುವುದಿಲ್ಲ.

ಶ್ರೀ ರಾಘವೇಂದ್ರರ ಸ್ವಾಮಿಗಳ ಬಗ್ಗೆ ನಮಗೆ ಹೆಚ್ಚಾಗಿ ಪರಿಚಯವಿರದ ಅಂಶ ಅವರು ಬರೆದ ಗ್ರಂಥಗಳು. ಶ್ರೀ ಗುರುರಾಘವೇಂದ್ರರು ಬರೆದ ಒಟ್ಟು ಗ್ರಂಥಗಳ ಸಂಖ್ಯೆ ೪೮ ಕ್ಕೂ ಹೆಚ್ಚು. ಅದರಲ್ಲಿ ಒಂದಾದರೂ ಕೂಡ ನಾವು ಪ್ರತಿ ಬಾರಿ ಮಠಕ್ಕೆ ಹೋದಾಗ ಸ್ಮರಿಸ ಬೇಡವೇ?   ಶ್ರೀ ರಾಘವೇಂದ್ರರು ಮಾಡಿದ ಗ್ರಂಥಗಳು ಆಚಾರ್ಯರ ಮಾಧ್ವರ ವೇದ ಸಮುದ್ರಕ್ಕೆ ಸೇರುವಂತ ಗಂಗಾ ನದಿ ಇದ್ದ ಹಾಗೆ. ಅವರ ಪ್ರತಿ ಮಾತಿನಲ್ಲಿ ವೇದಗಳಂತೆ ಭಗವಂತ ತುಂಬಿದ್ದಾನೆ.

ಶ್ರೀ ರಾಘವೇಂದ್ರರು  ಬರೆದ ಗ್ರಂಥಗಳನ್ನು ಐದು ವರ್ಗಗಳಾಗಿ ವಿಂಗಡಿಸಬಹುದು:
೧. ವೇದಗಳಿಗೆ ನೇರವಾಗಿ ಬರೆದ ವ್ಯಾಖಾನ (ಪುರುಷಸೂಕ್ತ, ಅಂಭೃಣಿ ಸೂಕ್ತ, ಹಿರಣ್ಯಗರ್ಭ ಸೂಕ್ತ, ಮಂತ್ರಾರ್ಥ ಮಂಜರಿ)
೨. ಆಚಾರ್ಯರು ವೇದಗಳಿಗೆ ಬರೆದ ವ್ಯಾಖ್ಯಾನಗಳ ಮೇಲೆ ವ್ಯಾಖ್ಯಾನ
೩. ಆಚಾರ್ಯರು ವೇದಗಳಿಗೆ ಬರೆದ ವ್ಯಾಖ್ಯಾನಗಳ ಮೇಲೆ ಟೀಕಾಚಾರ್ಯರ ಬರೆದ ವ್ಯಾಖ್ಯಾನಗಳ ಮೇಲೆ ಬರೆದ ವ್ಯಾಖ್ಯಾನ
೪. ಸ್ವತಂತ್ರ ಗ್ರಂಥಗಳು (ನದಿ ತಾರತಮ್ಯ ಸ್ತೋತ್ರ, ಕೃಷ್ಣ ಚಾರಿತ್ರ್ಯ ಮಂಜರಿ, ರಾಮ ಚಾರಿತ್ರ್ಯ ಮಂಜರಿ)
೫. ಗುರುಗಳ ಸ್ತವನ??

ಶ್ರೀ ಗುರುರಾಘವೇಂದ್ರರು ನ್ಯಾಯಸುಧಾ ಮೇಲೆ ಬರೆದ ಗ್ರಂಥ ಪರಿಮಳ. ಆದ್ದರಿಂದ ಅವರಿಗೆ ಪರಿಮಳಾಚಾರ್ಯ ಎಂಬ ಹೆಸರು. ಇದು ಮೇಲೆ ತಿಳಿಸಿದಂತೆ ಮೊರನೇ ವರ್ಗಕ್ಕೆ ಸೇರಿದ್ದು.

ಇನ್ನಾದರೂ ಪ್ರತಿ ಬಾರಿ ಶ್ರೀ ರಾಘವೇಂದ್ರರ ನೆನೆದಾಗ ತಪ್ಪದೆ ಪರಿಮಳ ಗ್ರಂಥದ ಬಗ್ಗೆಯೂ ನೆನೆಯೋಣ ಹಾಗೂ ಮಧ್ವ ಶಾಸ್ತ್ರದ ಪರಿಮಳ ಸವಿಯೋಣ.

ಅಭಿಜಿತ್ ವೀ ೨೦೧೭ ಶ್ರೀ ರಾಘವೇಂದ್ರರ ಆರಾಧನೆಯ ಅಂಗವಾಗಿ ಮಾಡಿದ ಪ್ರಥಮ ಪ್ರವಚನದ ಮುಖ್ಯ ಸಾರಾಂಶ. ಶ್ರೀ ಹರಿ ವಾಯುಗಳ ಕೃಪೆಯಿಂದ ಇನ್ನೂ ಹೆಚ್ಚಿನ ಸೇವೆ ಹೀಗೆ ನಡೆಯಲಿ ಎಂದು ಪ್ರಾರ್ಥಿಸುತ್ತೇನೆ.


Tuesday, August 15, 2017

ಆರಾಧನೆಯ ತೀರ್ಥ ಪ್ರಸಾದ ವ್ಯವಸ್ಥೆಯ ನ್ಯೂನತೆಗಳು

ಗುರುಗಳ ಆರಾಧನೆಗಳು ಮಧ್ವ ಪರಂಪರೆಯ ಒಂದು ಅವಿಭಾಜ್ಯ ಅಂಗವಾಗಿ ಬೆಳೆದುಕೊಂಡು ಬಂದಿವೆ. ಇದು ಮಾಧ್ವರ ಸಂಘಟನಾ ಕೌಶಲ್ಯ ಹಾಗೂ ಒಗ್ಗಟ್ಟನ್ನು ಸಾರುವ ವೇದಿಕೆಗಳು ಹೌದು.

ಆದರೆ ಆರಾಧನೆಗಳು ನಡೆಯುವ ಬಗೆಯನ್ನು ಸುಧಾರಣೆ ಮಾಡಲು ಅನೇಕ ಅವಕಾಶಗಳಿವೆ ಎಂದು ಅನಿಸುತ್ತದೆ. ಮುಖ್ಯವಾಗಿ ಕೆಲ ಅಂಶಗಳತ್ತ ಗಮನ ತೋರಲು ಕೋರುತ್ತೇನೆ.

ಜ್ಞಾನ ಕಾರ್ಯ ಪೂಜೆ ಮೊದಲಾದವುಗಳು ಮುಖ್ಯವಾದರೂ ಎಲ್ಲಿ ತೀರ್ಥ ಪ್ರಸಾದ ತಪ್ಪುವುದೋ ಅಥವಾ ತಡವಾಗುವುದು ಎಂದು ಅನೇಕ ಭಕ್ತರ ಗಮನ ಅತ್ತ ಕಡೆಯೇ ಹರಿದಿರುತ್ತದೆ. ತೀರ್ಥ ಪ್ರಸಾದ ಈ ಕಾರ್ಯಕ್ರಮಗಳ ಒಂದು ಪ್ರಮುಖ ಅಂಗ. ಈ ವ್ಯವಸ್ಥೆ ಸಮರ್ಪಕವಾಗಿಲ್ಲ.  ಈ ಕೆಳಗಿನ ನ್ಯೂನತೆಗಳು ಕಾರ್ಯಕ್ರಮಕ್ಕೆ ಇನ್ನೂ ಹೆಚ್ಚಿನ ಮೆರುಗು ಬರುವುದನ್ನು ತಪ್ಪಿಸುತ್ತಿವೆ

೧. ಯಾರಿಗೆ, ಯಾವಾಗ ಹಾಗೂ ಎಲ್ಲಿ ತೀರ್ಥ ಪ್ರಸಾದ ಎಂಬ ಮಾಹಿತಿ ಸರಿಯಾಗಿ ಸಿಗುವದಿಲ್ಲ

೨. ಕೆಲವೊಮ್ಮೆ ತೀರ್ಥ ಪ್ರಸಾದಕ್ಕಾಗಿ ನೂಕು ನುಗ್ಗಲು ಕೂಡ ಆಗುತ್ತದೆ. ಯಾವ ಪಂಕ್ತಿಯಲ್ಲಿ ಯಾರು ಕೂಡಬೇಕು ಎಂಬ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ

೩. ಆರಾಧನೆ ಎಂದ ಮೇಲೆ ಪ್ರಸಾದ ತಡವಾಗುವುದು ತಪ್ಪೇನಿಲ್ಲ. ಆದರೆ ಚಿಕ್ಕ ಮಕ್ಕಳು ವೃದ್ಧರು ಕೂಡ ಬಂದಿರುತ್ತಾರೆ. ಅವರಿಗೆ ಒಂದೇನಾದರೂ ವ್ಯವಸ್ಥೆ ಬೇಕು ಹಾಗೂ ಕಾಲ ಕಾಲಕ್ಕೆ ಯಾವಾಗ ತೀರ್ಥ ಪ್ರಸಾದ ಆರಂಭವಾಗಲಿದೆ ಎಂಬ ಮಾಹಿತಿ ದೊರೆಯಬೇಕು

೪. ತೀರ್ಥ ಪ್ರಸಾದ ಪ್ರತಿ ಪಂಕ್ತಿ ಊಟವಾದ ನಂತರ ಎಲೆ ಎತ್ತಿ ಎಂಜಲು ಬಳೆದು ಮುಂದಿನ ಪಂಕ್ತಿಗೆ ತಯಾರಿ ಮಾಡಲು ಜನ ಇರುವುದಿಲ್ಲ. ಈ ಸೇವೆ ಮಹಾ ಪುಣ್ಯಕರ. ಸೇವೆ ಮಾಡುವ ಆಸೆ ಇದ್ದರೂ ಎಲ್ಲಿ ಹೇಗೆ ಎಂಬ ಮಾಹಿತಿ ಇರುವುದಿಲ್ಲ.

೫. ದ್ವಾದಶಿ ಆರಾಧನೆ ಇದ್ದರೆ ಹಿಂದಿನ ದಿನದ ಏಕಾದಶಿ ಆದ್ದರಿಂದ ಎಲ್ಲರೂ ದಣಿದಿರುತ್ತಾರೆ.  ಆದ್ದರಿಂದ  ಮೊದಲೇ ಯೋಜನೆ ಮಾಡದೆ ಊಟಕ್ಕೆ ಕುಳಿತಾಗ ಬಡಿಸುವ ಸ್ವಯಂ ಸೇವಕಾರಿಗಾಗಿ ಕರೆಯುವುದು ಎಷ್ಟು ಸೂಕ್ತ? ಸ್ವಯಂ ಸೇವಕರು ಸಿಗದೆ ಈ ಸಮಯದಲ್ಲಿ ತಡ ಮಾಡುವುದು ಎಷ್ಟು ಸೂಕ್ತ?

೬. ತೀರ್ಥ ಪ್ರಸಾದ ಒಂದೇ ಸಮಯಕ್ಕೆ ಬೇರೆ ಬೇರೆ ಸ್ಥಳಗಳಲ್ಲಿ ವ್ಯವಸ್ಥೆ ಮಾಡಿದ್ದರೆ ಎಲ್ಲಿ ಎಷ್ಟು ಜನ ಕೂಡಬಹುದು ಎಂಬ ಮಾಹಿತಿ ಇರುವುದಿಲ್ಲ. ಗಮನಿಸಿ ಇದೇನು ಮೊದಲ ಬಾರಿ ಅಲ್ಲವಲ್ಲ

೭. ತಿಂದು ಮುಗಿಸಿದ ಎಲೆ ಹಾಗೂ ಎಂಜಲು ಎಲ್ಲಿ ಬೇಕಾದರಲ್ಲಿ ಬಿಸಾಡುವುದು ಏನು ಚೆನ್ನ?

೮. ಕೆಲವು ಕಡೆ ಊಟದ ನಂತರ ಕೈ ತೊಳೆಯಲು ಸರಿಯಾದ ಜಾಗದ ವ್ಯವಸ್ಥೆ ಹಾಗೂ ನೀರು ಇರುವುದಿಲ್ಲ. ಅದಕಾಗಿ ಕುಡಿಯುವ ನೀರು ಉಪಯೋಗಿಸುವುದು ಎಷ್ಟು ಸೂಕ್ತ?



ಬೇರೆ ಕೆಲ ಮುಖ್ಯ ಅಂಶಗಳು:
೧. ಚಿಕ್ಕ ಮಕ್ಕಳಿಗೆ ಹಾಲು ಹಾಗೂ ವೃದ್ಧರಿಗೆ ಅವಲಕ್ಕಿ ಅಥವಾ ಹಣ್ಣುಗಳ ವ್ಯವಸ್ಥೆ ಅತ್ಯಂತ ಉಪಯುಕ್ತ
೨. ಆರಾಧನಾ ಕಾರ್ಯಕ್ರಮ ಹಲವು ಘಂಟೆಗಳ ಕಾಲ ನಡೆಯುವುದು ಆದ್ದರಿಂದ ಯಾರಾದರೂ ಶೌಚಾಲಯ ಉಪಯೋಗಿಸಬೇಕೆಂದರೆ ವ್ಯವಸ್ಥೆ ಇರುವುದಿಲ್ಲ. ಇದ್ದರೆ ಕೀಲಿ ಹಾಕಿರುತ್ತಾರೆ ಅಥವಾ ನೀರು ಇರುವುದಿಲ್ಲ. ಎಲ್ಲ ಇದ್ದರೆ ಅದು ಉಪಯೋಗಿಸುವ ಸ್ಥಿತಿಯಲ್ಲಿ ಇರುವುದಿಲ್ಲ
೩. ಕುಡಿಯಲು ಕೆಲವೊಮ್ಮೆ ನೀರು ಸಿಗುವುದಿಲ್ಲ
೪. ಕೂಡಲು ಸಮರ್ಪಕ ಆಸನ ವ್ಯವಸ್ಥೆ ಇರುವುದಿಲ್ಲ
೫. ಒಂದು ಕಡೆ ಪ್ರವಚನ, ಒಂದು ಕಡೆ ಪಾರಾಯಣ ಮತ್ತು ಹಲವು ಕಡೆಗೆ ಟೀವೀ ಯಲ್ಲಿ ಪೂಜೆ ತೋರಿಸುವ ವ್ಯವಸ್ಥೆ ಮಾಡಬಹುದು
೬. ಈಗ ಸ್ವಂತ ವಾಹನಗಳಿಗೇನು ಕಮ್ಮಿಯಿಲ್ಲ. ಒಂದೇ ಊರಿಗೆ ಹೋಗುವ ವಾಹನವಿದ್ದು ಅದರಲ್ಲಿ ಸ್ಥಳಾವಕಾಶ ಇದ್ದರೂ ಅದನು ಉಪಯೋಗಿಸಿಕೊಳ್ಳಲು ಆಗುತಿಲ್ಲ

ದುಡ್ಡಿಗೇನು ಕಮ್ಮಿಯಿಲ್ಲ. ಭಗವಂತನ ಅನುಗ್ರಹದಿಂದ ಈ ಕಾರ್ಯಕ್ರಮಗಳು ಅದ್ದೂರಿಯಾಗಿಯೇ ನಡೆಯುತ್ತಿವೆ. ಆದರೆ ಅದರ ಸಮರ್ಪಕ ಬಳಕೆ ಆಗುತಿಲ್ಲ. ಈ ತಂತ್ರಜ್ಞಾನದ ಯುಗದಲ್ಲಿ ಕೂಡ ನಾವು ಅದನು ಸರಿಯಾಗಿ ಬಳಸಿಕೊಳ್ಳದೆ ಅವ್ಯವಸ್ಥೆ ಮುಂದುವರಿದರೆ ಯುವ ಜನತೆಯಿಂದ ಇನ್ನೂ ದೂರವಾಗುವದರಲ್ಲಿ ಸಂಶಯವಿಲ್ಲ. ಹಾಗಾದಾಗ ಯುವ ಜನರು ಧರ್ಮ ವಿಮುಖರಾಗುತಿದ್ದಾರೆ ಎಂದು ದೂರುವುದು ಎಷ್ಟು ಸರಿ?


Monday, August 14, 2017

ಶಾಸ್ತ್ರ ಇಂದು ಸಮಾಜದ ದೊಡ್ಡ ಹಾಗೂ ಅತ್ಯಂತ ಅವಶ್ಯಕ ಮಧ್ಯಮ ವರ್ಗಕ್ಕೆ ಏಕೆ ತಲುಪುತಿಲ್ಲ?

ಮಧ್ಯಮ ವರ್ಗ ಅಂದರೆ ಯಾರು ಎಂಬ ಪ್ರಶ್ನೆ ಪ್ರಥಮವಾಗಿ ಏಳುತ್ತದೆ. ಮಧ್ಯಮ ವರ್ಗ ಆರ್ಥಿಕವಾಗಿ ಸಂಪೂರ್ಣ ಸಬಲರಲ್ಲ. ಆರ್ಥಿಕ ಸಧೃಡತೆ ಆಸೆ ಒಂದು ಕಡೆಯಾದರೆ ಇನ್ನೊಂದು ಕಡೆ ಇದ್ದ ಪರಿಸ್ಥಿತಿ ಹದಗೆಡದಂತೆ ನೋಡುಕೊಳ್ಳುವ ಜವಾಬ್ದಾರಿ. ಎರಡನ್ನು ಸರಿದೂಗಿಸುವ ಲೆಕ್ಕಾಚಾರದಲ್ಲೇ ಇವರ ಹೆಚ್ಚಿನ ಸಮಯ ಕಳೆದು ಹೋಗುತ್ತಿದೆ.

ಮದ್ಯಮ ಪದವೇ ಸೂಚಿಸುವಂತೆ ಯಾವುದನ್ನು ಹಲ್ಲು ಕಚ್ಚಿ ಹಿಡಿದು ನಿಂತು ನಿಭಾಯಿಸಿ ಬಿಡುತ್ತೇನೆ ಎಂಬ ಛಾತಿ ಇಲ್ಲದಿರುವ ಮನಸ್ಥಿತಿ. ಈ ಮನಸ್ಥಿತಿಯಿಂದ ಹೊರ ಬರುವುದು ಸುಲಭವಲ್ಲ. ಆರ್ಥಿಕ ಬಲ ಇದರಿಂದ ಹೊರ ಬರಲು ಒಂದು ಮುಖ್ಯ ಅಂಶ ಎಂಬುದು ಪ್ರಶ್ನಾತೀತ.

ಅದಕ್ಕೆ ಮಧ್ಯಮ ವರ್ಗ ಶಾಸ್ತ್ರವನ್ನು ಸಂಪೂರ್ಣವಾಗಿ ಬಿಡಲು ಆಗದೆ ಹಾಗೂ ಪೂರ್ಣವಾಗಿ ಪಾಲಿಸಲು ಆಗದೆ ಪಾಪ ಪ್ರಜ್ಞೆಯಲ್ಲಿ ತೊಳಲಾಡುತ್ತಿದೆ.

ಅವರಿಗೆ ಬಿಡಲು ಮನಸಿಲ್ಲ. ಸನಾತನವಾಗಿ ಬಂದ ಸಂಸ್ಕಾರಗಳನ್ನು ಬಿಟ್ಟುಕೊಳ್ಳುವ ಮನಸು ಬಾರದಿರುವುದು ಒಂದು ಕಡೆಯಾದರೆ ಬಿಟ್ಟರೆ ಎಲ್ಲಿ ಮತ್ತೆ ಹೊಸ ಬಿಕ್ಕಟ್ಟೊಂದು ಜೀವನದಲಿ ಬಂದು ಬಿಟ್ಟರೆ ಎಂಬ ಭಯ ಕೂಡ.   ಕತ್ತಿಯ ಅಲುಗಿನ ಮೇಲೆ ನಡೆದಂತೆ ಅವರ ಜೀವನ.

ಇಂಥ ಪರಿಸ್ಥಿಯಲ್ಲಿ ಅವರಿಗೆ ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಸುಲಭವಾಗುವಂತೆ ಹಾಗೂ ಅಳವಡಿಸಿಕೊಂಡಾಗ ಕೆಲವಾದರೂ ಲಾಭ ಅಥವಾ ಅನುಕೂಲಗಳು ತಕ್ಷಣ ದೊರಕುವಂತೆ ನೋಡಿ ಕೊಳ್ಳುವುದು ಬಹು ಮುಖ್ಯವಾಗುತ್ತದೆ.

ಇಂದಿನ ಮಠ ಹಾಗೂ ವಿದ್ವಾಂಸರಿಗೆ ಇಂದೊಂದು ದೊಡ್ಡ ಸವಾಲು. ಎಲ್ಲ ತಕ್ಷಣದಲ್ಲಿ ದೊರೆಯುವ ಅಥವಾ ಬೇಕೆನ್ನುವ ಕಾಲ ಘಟ್ಟದಲ್ಲಿ ನಾವಿದ್ದೇವೆ. ಆ ಕಾಲಕ್ಕೆ ಸಮರ್ಪಕವಾದ ಉತ್ತರ ಹಾಗೂ ವಿಧಾನಗಳು ನಮ್ಮ ಸಂಪ್ರದಾಯ ಹಾಗೂ ಪರಂಪರೆಯಲ್ಲೂ ಇವೆ ಎಂದು ತೋರಿಸಿ ಕೊಡಬೇಕಾದ ಅವಶ್ಯಕತೆ ಇದೆ.

ಪ್ರವಚನಗಳು ಇಂದು ವೆಬ್‌ಸೈಟ್ ಹಾಗೂ ಯೂ ಟ್ಯೂಬೀನಲ್ಲಿ ಲಭ್ಯವಿರಿವುದು ನಿಜಕ್ಕೂ ಶ್ಲಾಘನೀಯ.  ಪಂಚಾಗ, ಸಂಧ್ಯಾವಂದನೆ, ಸ್ತೋತ್ರಗಳ ಅಪ್ಲಿಕೇಶನ್ ಮೊಬೈಲ್ನಲ್ಲಿ ಸಿಗುವುದು ಕೂಡ ಉತ್ತಮ ಬೆಳವಣಿಗೆ.

ಆದರೆ ಇಲ್ಲಿ ಗಮನಿಸಬೇಕಾದ ಅಂಶ ಇವು ಒಂದು ರಂಗೋಲಿಯ ಚುಕ್ಕಿಗಳಂತೆ. ಅವುಗಳನು ಈ ಕಾಲದ ಕಲಾ ಪ್ರಜ್ಞೆಗೆ ಅನುಗುಣವಾಗಿ ಜೋಡಿಸುವ ಕೆಲಸ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗುವ ಅವಶ್ಯಕತೆ ಇಂದು ಹೆಚ್ಚಾಗಿದೆ.

ಚುಕ್ಕಿಗಳನು ಈ ಕಾಲದ ಕಲಾ ಪ್ರಜ್ಞೆಗೆ ಅನುಗುಣವಾಗಿ ಜೋಡಿಸುವುದು ಅಂದರೇನು?

ಶಾಸ್ತ್ರವೆಂಬುದು ಸನಾತನ ಹಾಗೂ ಸಾರ್ವಕಾಲಿಕವಾದರೂ ಅದನು ಇಂದಿನ ಕಾಲದ ಇತಿ ಮಿತಿಗಳಲ್ಲಿ ಹೇಗೆ ಅಳವಡಿಸಿಕೊಳ್ಳ ಬೇಕು ಹಾಗೂ ಅದರಿಂದ ದಿನ ನಿತ್ಯದ ಜೀವನ ಹೇಗೆ ಉತ್ತಮಗೊಳ್ಳುತ್ತದೆ ಎಂಬುದನ್ನು ಮರು ವ್ಯಾಖ್ಯಾನ ಮಾಡಬೇಕಾಗಿದೆ.

ಉದಾಹರಣೆಗೆ ಅಪಾರ್ಟ್ಮೆಂಟ್‌ಗಳಲ್ಲಿ ಮಡಿ ನೀರು ಹೇಗೆ? ಮಂತ್ರ ಅನ್ನುವದರಿಂದ ನಾನು ಇಂದು ಕಚೇರಿಯ ಮೀಟಿಂಗ್‌ನಲ್ಲಿ ಚೆನ್ನಾಗಿ ಮಾತಾಡಲು ಹೇಗೆ ಅನುಕೂಲ ಆಗುತ್ತದೆ?

ಅಂದರೆ ದಿನ ನಿತ್ಯದಲ್ಲಿ ಶಾಸ್ತ್ರ ಅನುಷ್ಟಾನಕ್ಕೆ ಇರುವ ತೊಂದರೆಗಳಿಗೆ ಸಮಾಧಾನ ಹಾಗೂ ಲೌಕಿಕದಲ್ಲಿ ಅದರ ಉಪಯುಕ್ತತೆ ಬಗ್ಗೆ ಒತ್ತು ಕೊಟ್ಟು ಹೇಳುವ ಅವಶ್ಯಕತೆ ಇದೆ.

ಈ ಬಗ್ಗೆ ಸಹೃದಯರು ಗಮನಿಸಿ ಪರಿಹಾರ ಸೂಚಿಸಬೇಕೆಂದು ಮನವಿ ಮಾಡುತ್ತೇನೆ.
   

Sunday, August 13, 2017

ಒಳ್ಳೆಯದಾದಾಗ ಭಗವಂತನ ಅನುಗ್ರಹ ಇಲ್ಲವಾದರೆ ನಮ್ಮ ಪ್ರಾರಬ್ಧ ಯಾಕೆ?

ಒಳ್ಳೆಯದೂ ಅಥವಾ ಕೆಟ್ಟದ್ದೋ ಮೂಲಭೂತವಾಗಿ ಒಂದು ಕಾರ್ಯದ ಪರಿಣಾಮ.

ಒಂದು ಕಾರ್ಯವಾಗಬೇಕಾದರೆ ಮೂರು ಬೇಕು. ಯೋಗ್ಯತೆ, ಪ್ರಯತ್ನ ಹಾಗೂ ಭಗವಂತನ ಸಂಕಲ್ಪ.

ಇನ್ನೂ ಒಳ್ಳೆಯದು ಅಥವಾ ಕೆಟ್ಟದ್ದು ಎಂದು ತೀರ್ಮಾನಿಸಲು ಭಗವಂತನ ಮಾಡಿದ ಸಂವಿಧಾನ ವೇದಗಳು. ಭಗವಂತ ನಮ್ಮ ಕರ್ಮಕ್ಕೆ ಅನುಗುಣವಾಗಿ ವೇದಗಳಲ್ಲಿ ತಿಳಿಸಿದಂತೆ ಫಲ ಕೊಡುವೆನೆಂದು ಸಂಕಲ್ಪ ಮಾಡಿದ್ದಾನೆ ಆದರೆ ಕೊಡಲೇ ಬೇಕೆಂಬ ಆಗ್ರಹ ಆತನಿಗಿಲ್ಲ. ನಾವು ವೇದಕ್ಕನುಗುಣವಾದ ಕರ್ಮ ಮಾಡಿಯೂ, ನಮಗೆ ಯೋಗ್ಯತೆ ಇದ್ದರೂ  ಕೂಡ ಒಳ್ಳೆಯ ಫಲ ಭಗವಂತ ಕೊಡದಿದ್ದರೆ ನಾವೇನು ಮಾಡಲು ಸಾಧ್ಯ? ಆದ್ದರಿಂದ ಒಳ್ಳೆಯ ಫಲ ನಮ್ಮ ಕರ್ಮ, ಯೋಗ್ಯತೆ, ಪುಣ್ಯ ಎಲ್ಲ ಇದ್ದಾಗಲೂ ಕೂಡ ಭಗವಂತನ ಅನುಗ್ರಹ ಇಲ್ಲದಿದ್ದರೆ ಸಿಗುವದಿಲ್ಲ.

ಆದ್ದರಿಂದ ಒಳ್ಳೆಯದಾಗಲು ಬೇಕಾದ್ದ ಎಲ್ಲ ಪೂರ್ವಾಪೇಕ್ಷಿತಗಳನ್ನು ಮಾಡಿದ್ದರೂ ಕೊನೆಯದಾಗಿ ಭಗವಂತನ ಅನುಗ್ರಹ ಬೇಕೇ ಬೇಕು. ಇನ್ನೂ ಇಲ್ಲ ಅಂದ್ರೆ ಭಗವಂತ ಯಾರಿಗೂ ಪಕ್ಷಪಾತ ಮಾಡುವುದಿಲ್ಲ. ಅದೇನೇ ಇದ್ದರೂ ನಮ್ಮ ಸ್ವರೂಪ ಹಾಗೂ ಪೂರ್ವ ಕರ್ಮ ಅಥವಾ ಪ್ರಾರಾಭ್ದಕ್ಕನುಗುಣವಾಗಿ.

ಫೇಸ್ ಬುಕ್ ನಲ್ಲಿ ಸುಶೀಲ್ ಜೋಶಿ ಕೇಳಿದ ಪ್ರಶ್ನೆಗೆ ಉತ್ತರ.

Friday, August 4, 2017

ಭಗವಂತ ನಮಗಾಗಿ ಮಾಡದಿದ್ದದು ಏನು?

ಭಗವಂತ ನಮಗಾಗಿ ಮಾಡಿರುವದನ್ನು ನಾವು ಅನಂತ ಜನ್ಮ ಎತ್ತಿ ಬಂದರೂ ತಿಳಿಯಲಾಗದು. ಆದ್ದರಿಂದಲೇ ನಾವು ಓದುವ ಪ್ರತಿ ಆಧ್ಯಾತ್ಮ ಪುಸ್ತಕಗಳು ಅಥವಾ ಕೇಳುವ ಪ್ರವಚನಗಳು ಭಗವಂತ ನಮಗಾಗಿ ಮಾಡಿದನ್ನು ಹೇಳುತ್ತವೆ. ಈ ವ್ಯಾಪಕತೆ ಹೊಸದಾಗಿ ಭಗವಂತನ ತಿಳಿಯಲು ಹೋರಾಟ ಜಿಜ್ಞಾಸುವಿಗೆ ತಲೆ ಬಿಸಿ ಮಾಡುತ್ತದೆ.

ಅದಕಾಗಿ ನಾವು ಮೊದಲು ಭಗವಂತ ನಮಗಾಗಿ ಏನು ಮಾಡಿಲ್ಲ ಎಂದು ತಿಳಿಯುವುದು ಉತ್ತಮ. ಏಕೆಂದರೆ ಅದು ಬಲು ಕಡಿಮೆ. ಇದನು ಅರ್ಥ ಮಾಡಿ ಕೊಂಡಾಗ ಭಗವಂತ ನಮಗಾಗಿ ಮಾಡಿದ್ದರ ಅಪಾರತೆಯ ಹಾಗೂ ಕರುಣೆಯ ಅರಿವು ಆಗುತ್ತದೆ.

ಇದರ ಅರಿವಿಲ್ಲದಾಗ ನಾವು ತಿಳಿದೊ ತಿಳಿಯದೆಯೋ ನಮ್ಮ ಪ್ರಾರಬ್ಧಕ್ಕಾಗಿ ಭಗವಂತನನ್ನು ದೂಷಿಸುತ್ತೇವೆ. ಭಗವಂತನೇ ಎಲ್ಲ ಸೃಷ್ಟಿಸಿದ್ದರೆ ನನಗೇಕೆ ಈ ಬುದ್ಧಿ ಕೊಟ್ಟ? ನನ್ನಿಂದ ಏಕೆ ಈ ಕೆಟ್ಟ ಕೆಲಸ ಮಾಡಿಸಿದ? ನಮ್ಮ ಹಿಂದಿನ ಜನ್ಮದ ಕರ್ಮ ಫಲ ಕಾರಣ ಎಂಬ ಅರಿವು ಬಂದಾಗ ಕೂಡ, ನಾನು ಮೊದಲ ಬಾರಿ ಹುಟ್ಟಿದಾಗ ಯಾವುದೇ ಕರ್ಮ ಫಲ ಇರಲಿಲ್ಲತಾನೇ, ಹಾಗಾದರೆ ಪ್ರಥಮ ಬಾರಿ ನಾನೇಕೆ ಕೆಟ್ಟ ಕೆಲಸ ಮಾಡಿದೆ ಎಂಬ ಪ್ರಶ್ನೆ ಏಳುತ್ತದೆ. ಇದಕೇನು ಉತ್ತರ?

ಇದನು ತಿಳಿಯಲು ಇನ್ನೂ ಕೆಲವು ಮೂಲಭೂತ ಪ್ರಶ್ನೆಗಳನು ಕೇಳುವ.

೧. ಜೀವಿಗಳು ಸೃಸ್ಟಿಯಾಗಿದ್ದು ಯಾವಾಗ?
ಜೀವಿಗಳು ಭಗವಂತನಂತೆ ಅನಾದಿ ನಿತ್ಯರು.

೨. ಜೀವಿಗಳಿಗೆ ಸಾತ್ವಿಕ, ರಾಜಸಿಕ ಹಾಗೂ ತಾಮಸಿಕ ಗುಣ ನೀಡಿರುವರು ಯಾರು?
ಇದೊಂದು ಬಲು ಮುಖ್ಯವಾದ ಪ್ರಶ್ನೆ. ಏಕೆಂದರೆ ಭಗವಂತ ಕೊಟ್ಟಿದ್ದು ಎಂದಾದರೆ ಇಲ್ಲಿ ರಾಜಸಿಕ ಹಾಗೂ ತಾಮಸಿಕ ಜೀವಿಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ.

ಇದಕ್ಕೆ ಒಂದು ಉತ್ತರ ಸಿಕ್ಕಿದ್ದು ಶ್ರೀ || ಪೇಜಾವರ ಶ್ರೀಗಳ ನ್ಯಾಯಸುಧಾ ಸಾರ ಪ್ರವಚನದಲ್ಲಿ.
ಅವರು ಹೇಳಿದ್ದು: ಜೀವನ ವ್ಯಕ್ತಿತ್ವ ದೇವರ ಸೃಷ್ಟಿ ಅಲ್ಲ. ಅದು ಆನಾದಿಯಾಗಿ ಬಂದಿದ್ದು.

ಈ ಉತ್ತರ ಸಮರ್ಪಕ ಅನಿಸುತ್ತೆ. ಏಕೆಂದರೆ ಅನೇಕ ಪ್ರವಚನಗಳಲ್ಲಿ ಕೇಳಿರುವಂತೆ ಭಗವಂತ ತೋಟಗಾರನಂತೆ ಜೀವಿಗಳನ್ನು ಬೀಜಗಳಂತೆ ಬಿತ್ತಿ ಅವುಗಳಿಗೆ ನೀರುಣಿಸಿ ಪೋಷಣೆ ಮಾಡುತ್ತಾನೆ. ಬೀಜಗಳ ಗುಣದಂತೆ ಅವು ಬೆಳೆಯುತ್ತವೆ. ಅದರಲ್ಲಿ ಭಗವಂತನ ಪಾತ್ರವಿಲ್ಲ. ಬೀವಿನ ಬೀಜ ಬೀವಿನ ಗಿಡವಾಗಿ ಹಾಗೂ ಮಾವಿನ ಗೊಪ್ಪ ಮಾವಿನ ಗಿಡವಾಗಿ ಬೆಳೆದು ಅದರ ಗುಣಧರ್ಮದಂತೆ ಫಲ ಕೊಡುತ್ತವೆ.

ಜೀವಿಗಳ ಗುಣದಂತೆ ಅವರವರ ಕರ್ಮ ಸಂಕೋಲೆ ಬಿಗಿಯುತ್ತ ಹೋಗುತ್ತದೆ.

೩. ಜೀವಿಯ ಸ್ವರೂಪ ಭಗವಂತ ಸೃಷ್ಟಿ ಅಲ್ಲದಿದ್ದರೆ ಜೀವಿಗೆ ಕರ್ತೃತ್ವ ಸ್ವಾತಂತ್ರ್ಯ ಕೊಟ್ಟಿದ್ದಾನೆಯೇ ? 

ಈ ಪ್ರಶ್ನೆಗೆ ಉತ್ತರ ಈ ಅಧ್ಭುತವಾದ ಪ್ರವಚನದಲ್ಲಿ ದೊರಕಿದೆ. ಅದರ ಸಾರಾಂಶ ಕೆಳಗಿದೆ.

ಜೀವನ ಯೋಗ್ಯತೆ ಸ್ವಭಾವ ಅಥವಾ ಸ್ವರೂಪ ಕೂಡ ಜೀವನಂತೆ ಅನಾದಿ ಕಾಲದಿಂದ ಇದೆ. ಇದು ದೇವರು ಮಾಡಿದ್ದಲ್ಲ. ಇದು ದೇವರು ಮಾಡಿದಲ್ಲದಿದ್ದರೂ ಜೀವನಿಗೆ ಸ್ವಾತಂತ್ರ್ಯ  ಇಲ್ಲ.  ಜೀವ ಹುಟ್ಟಿಲ್ಲ. ಅವನು ಹೊಸದಾಗಿ ಸೃಷ್ಟಿ ಆಗಿಲ್ಲ. ಜೀವ ತನ್ನ ಸ್ವರೂಪಕ್ಕೆ ಅನುಗುಣವಾಗಿ ಸಾತ್ವಿಕ, ತಾಮಸಿಕ ಕರ್ಮ ಮಾಡುತ್ತಾನೆ.  ಆ ಕರ್ಮಗಳಿಗೆ ವೇದದ ಪ್ರಕಾರ ಫಲ ಕೊಡುವುದು ದೇವರು.

ಜ್ಞಾನ, ಇಚ್ಛೆ, ಪ್ರಯತ್ನ ಈ ಮೂರುಗಳ ಸಂಗಮವೇ ಕರ್ತೃತ್ವ. ಕರ್ತೃತ್ವಕ್ಕೆ ಸ್ವಾತಂತ್ರ್ಯದ ಅವಶ್ಯಕತೆ ಇಲ್ಲ. ಜೀವನ ಯೋಗ್ಯತೆ, ಪ್ರಯತ್ನ ಹಾಗೂ ಭಗವಂತನ ಸಂಕಲ್ಪ ಈ ಮೂರು ಸೇರಿದಾಗ ಕಾರ್ಯ ಆಗುತ್ತದೆ. ಭಗವಂತನ ಸಂಕಲ್ಪ ಅನಾದಿ ಕಾಲದ ಕರ್ಮಗಳ ಫಲ ಕೊಡುವದಕ್ಕೆ. ಅದನ್ನು ಭಗವಂತ ವೇದ ವಾಕ್ಯಗಳಿಗೆ ಅನುಗುಣವಾಗಿ ಕೊಡುತ್ತಾ ಹೋಗುತ್ತಾನೆ. ವೇದ ಭಗವಂತನ ಸಂವಿಧಾನ.  ಇಲ್ಲಿ ಗಮನಿಸಬೇಕಾದ ಅಂಶ ಜೀವಿಯ ಯೋಗ್ಯತೆ ಹಾಗೂ ಪ್ರಯತ್ನದ ಹೊಣೆ ಕೇವಲ ಜೀವಿಯದೆ ಆಗಿದೆ.  ಇಲ್ಲಿ ಯಾವುದೇ ಅನ್ಯಾಯ ಅಥವಾ ಪಕ್ಷಪಾತದ ಪ್ರಶ್ನೆ ಇಲ್ಲ.

ಜೀವನ ಸ್ವರೂಪ ಭಗವಂತನ ಸೃಷ್ಟಿ ಅಲ್ಲದಿದ್ದರೂ ಜೀವ ತನ್ನೆಲ್ಲ ಕ್ರಿಯೆಗಳಿಗಾಗಿ ಭಗವಂತನ ಮೇಲೆ ಅವಲಂಬಿಸಿದ್ದಾನೆ. ಅತಿ ಸರಳವಾದ ಕ್ರಿಯೆಗಳಾದ ಉಸಿರಾಟ, ಉಂಡ ಅನ್ನ ಜೀರ್ಣವಾಗುವುದು ಕೂಡ ಜೀವಿಯ ಕೈಯಲ್ಲಿ ಇಲ್ಲ. ಇದರಿಂದ ಹರಿ ಸರ್ವೊತ್ತಮತ್ವಕ್ಕೆ ಯಾವುದೇ ಧಕ್ಕೆ ಇಲ್ಲ.

|| ಶ್ರೀ ಕೃಷ್ಣಾರ್ಪಣ ಮಸ್ತು ||